ಇಫಿಜೀನಿಯ 1

	ಗ್ರೀಕ್ ಮಹಾಪುರಾಣಗಳ ಪ್ರಕಾರ ಆಗಮೆಮ್ನಾನ್ ಮತ್ತು ಕ್ಲೈಟಮ್‍ನೆಸ್ಟ್ರರ ಒಬ್ಬ ಮಗಳು. ಒರೆಸ್ಟಿಸ್ ಮತ್ತು ಎಲೆಕ್ಟ್ರರ ಸಹೋದರಿ. ಟ್ರಾಯ್ ನಗರದ ಮೇಲೆ ಯುದ್ಧ ಘೋಷಿಸಿದಾಗ ಆಗಮೆಮ್ನಾನನ ಸೇನೆ ಆಲಿಸ್‍ರೇವಿನಲ್ಲಿ ಸಿದ್ಧವಾಗಿತ್ತು. ಆಗ ದೇವಸ್ಥಾನದ ಗಂಡು ಜಿಂಕೆಯನ್ನು ಬಲಿ ಕೊಟ್ಟನೆಂಬ ಕಾರಣದಿಂದ ಆರ್ಟೆಮಿಸ್ ದೇವತೆಗೆ ಆಗಮೆಮ್ನನನ ಮೇಲೆ ಕೋಪ ಬಂತು. ದೇವಕೋಪ ಶಮನವಾಗದ ಹೊರತು ಸಹಾಯಕಮಾರುತಗಳು ಬೀಸವು, ಹಡಗುಪಡೆ ಹೊರಡದು. ಕೋಪಕ್ಕೆ ಕಾರಣನಾದವನ ಕನ್ಯಾಪುತ್ರಿಯನ್ನು ಬಲಿಕೊಟ್ಟಲ್ಲಿ ದೇವತೆಯ ಕೋಪ ಶಮನವಾಗುವುದೆಂದು ಹೇಳಿದ ಪುರೋಹಿತವಚನದಂತೆ ಆಗಮೆಮ್ನಾನ್ ಇಫಿಜೀನಿಯಳನ್ನು ಬಲಿಕೊಡುವ ಸಿದ್ಧತೆ ನಡೆಸಿದ. ಅಕಿಲೀಸನಿಗೆ ಕೊಟ್ಟು ಮದುವೆ ಮಾಡುತ್ತೇನೆಂದು ಹುಸಿ ಆಶೆ ತೋರಿಸಿ ಅವಳನ್ನು ಅಲ್ಲಿಗೆ ಕರೆಸಿದ. ಆ ಹೆಣ್ಣುಮಗಳ ಮುಗ್ಧತೆಯನ್ನು ಕಂಡು ಕನಿಕರಿಸಿದ ದೇವತೆ ಅವಳಿಗೆ ಪ್ರತಿಯಾಗಿ ಜಿಂಕೆಯೊಂದನ್ನು ವಧ್ಯಸ್ಥಾನದಲ್ಲಿರಿಸಿ ಕನ್ಯೆಯನ್ನು ಟಾರಿಯನ್ನರ ನಾಡಿಗೊಯ್ದು ಅಲ್ಲಿ ಅವಳನ್ನು ತನ್ನ ಪೂಜಾರಿಣಿಯಾಗಿ ಇರಿಸಿದಳು. ಅವಳನ್ನು ಬಲಿಕೊಟ್ಟನೆಂದೂ ಒಂದು ಕಥೆ ಇದೆ. ಊರಿಗೆ ಬಂದ ಹೊಸಬರನ್ನು ದೇವತೆಗೆ ಬಲಿಯಿಕ್ಕುವುದು ಟಾರಿಸ್‍ನಾಡಿನವರ ಸಂಪ್ರದಾಯ. ಆರ್ಟೆಮಿಸಳ ಪ್ರತಿಮೆಯೊಂದನ್ನು ತರಲು ಅಲ್ಲಿಗೆ ಬಂದ ಒರೆಸ್ಟಿಸ್‍ನನ್ನು ಆ ಜನ ಬಲಿಗೊಡಲು ಯತ್ನಿಸಿದಾಗ ಇಫಿಜೀನಿಯ ತನ್ನ ಸಹೋದರನನ್ನು ಗುರುತಿಸಿ ದೇವತೆಯ ಪ್ರತಿಮೆಯನ್ನು ತೆಗೆದುಕೊಂಡು ಅವನೊಂದಿಗೆ ಗ್ರೀಸಿಗೆ ಓಡಿಹೋಗುತ್ತಾಳೆ.

	ಈ ಕಥೆಗೆ ಅನೇಕ ಪಾಠಾಂತರಗಳಿವೆ. ಇಫಿಜಿನಿಯಳ ಕಥೆಯನ್ನು ಪ್ರಸಿದ್ಧ ನಾಟಕಕಾರರಾದ ಈಸ್ಕಿಲಸ್. ಸೊಪೋಕ್ಲಿಸ್ ಮುಖ್ಯವಾಗಿ ಯೂರಿಪಿಡೀಸ್-ಇವರೂ ಈಚೆಗೆ ರ್ಯಾಸೀನ್ ಮತ್ತು ಗಯಟೆ ಕವಿಗಳೂ ಬಳಸಿಕೊಂಡು ನಾಟಕರಚನೆ ಮಾಡಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ